ನನ್ನ ಹೆಸರು.. · ಯಾ ರೂಹಿ ....

ನನ್ನ ಹೆಸರು..

nanna-hesaru

“ನಿನ್ನ ಹೆಸರು ಹೇಳುವಾಗೆಲ್ಲಾ ಖುಷಿಯಲೆಗಳು ಪುಟಿದೇಳುತ್ತವೆ.. ಭಾವ ತಂತುವೊಂದು ಮೀಟಿ ರಾಗವ ಹೊಮ್ಮಿದ ಹಾಗೆ.. ಅದು ತರಂಗವೆಬ್ಬಿಸುತ್ತಾ ಹಾಡಿನಾಚೆಗೂ ಇರುವ ಶುಭದ ಹಾದಿಯನ್ನೇ ತೆರೆಯುವ ಹಾಗೆ.. ನನ್ನ ಕುಟುಂಬದಲ್ಯಾರೂ ಈ ಹೆಸರಿನವರಿಲ್ಲ.. ಯಾರಾದರೂ ಬಾಯಿಂದ ಈ ಹೆಸರು ಕೇಳಿದರೆ ಆತ್ಮದೊಳಗೊಂದು ವಿದ್ಯುತ್-ಸಂಚಲನ… ನಿನ್ನ ಹೆಸರು ಮತ್ತೆ ಮತ್ತೆ ಕೂಗುವುದು ನನ್ನೊಳಗೆ ಸಂಭ್ರಮದ ಹೊನಲು ಸೃಷ್ಟಿಸುತ್ತದೆ… “..
ನನ್ನ ಹೆಸರಿನ ಬಗ್ಗೆ ಅವಳು ಹೇಳುತ್ತಲೇ ಇದ್ದಳು..

ಅವತ್ತು ಭಾನುವಾರ ನಾನು ಊರಲ್ಲಿದ್ದೆ, ಹಾಸ್ಟೆಲಿನಲ್ಲಿ ಒಂದೆರಡು ಮಂದಿ ಮಾತ್ರ ಇದ್ದರು. ಅಂದು ಬೆಳಿಗ್ಗೆ ಮೂರು ದಿನಗಳ ಹಿಂದಷ್ಟೇ ಹಾಸ್ಟೆಲು ಸೇರಿದ್ದ ನನ್ನ ಹೆಸರಿನ ವಯಸ್ಸಾದ ಒಬ್ಬರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಅಸುನೀಗಿದ್ದರು. ಕ್ಷಣ ಮಾತ್ರದಲ್ಲಿ ಹಾಸ್ಟೆಲಿಂದ ಹೋದ ಮೆಸೇಜ್ ಈ ರೀತಿಯಿತ್ತು “ಹುಸೇನ್ ನೋ ಮೋರ್.. ”
ಮೆಸೇಜ್ ಓದಿದವರೆಲ್ಲಾ ದಿಗ್ಭ್ರಾಂತರಾದರು. ಪಾಪ.. ಅವನಿಗೆ ಸಾವಿನ ವಯಸ್ಸಾಗಲಿಲ್ಲವೇ…. ?? ಅಂತೆಲ್ಲಾ ಮಾತುಕತೆ ನಡೆಯಿತು. ಕೊನೆಗೆ ಆ ದಿನ ಸಂಜೆ ಸತ್ತಿದ್ದು ನಾನಲ್ಲ ಅಂತ ಗೊತ್ತಾದ್ಮೇಲೆ ಅದು ತಮಾಷೆ ವಸ್ತುವಾಯ್ತು.
ಅಲ್ಲೂ..ಇಲ್ಲೂ ನನ್ನ ಹೆಸರು… ಒಂದು ಕಡೆ ಬದುಕಿನ ಉತ್ಸಾಹ ಕೊಟ್ಟಿತು. ಇನ್ನೊಂದು ಕಡೆ ಸಾವಿನ ಸೂತಕವಾಯ್ತು .. !

~ಹುಸೇನಿ

Leave a comment

ಮತ್ತೆರಡು ರೂಹಿ ಪದ್ಯ · ಹುಸೇನಿ ಪದ್ಯಗಳು - 29 · ಹುಸೇನಿ_ಪದ್ಯಗಳು

ಮತ್ತೆರಡು ರೂಹಿ ಪದ್ಯ..(ಹುಸೇನಿ ಪದ್ಯಗಳು – 29)

roohi

೧)
ಯಾ ರೂಹಿ…
ನನ್ನ ಉರಿ ಹಂಬಲಗಳ ಹೊಗೆ
ಅಷ್ಟೂ ಮೇಣದ ಬತ್ತಿಗಳ ಬೂದಿ
ಯಾವುದೂ ಈಗ ನೆನಪಾಗುತ್ತಿಲ್ಲ
ಜೀವಕ್ಕೆ ಜೀವ ಜೋತುಬೀಳುವುದನ್ನು
ಕಲಿಯುವಾಗ
ನನ್ನೊಳಗೆ ಮರು ಹುಟ್ಟಿನ ಸಂಭ್ರಮ..
ಈಗ ‘ಬದುಕುತ್ತಿದ್ದೇನೆ’ ಅಷ್ಟೇ… !
೨)
ಯಾ ರೂಹಿ..
ಇಂದೂ ಸಂಜೆಸೂರ್ಯನ ಕಿರಣ ವೈಭವಿಸುತ್ತಿತ್ತು.
ನಮ್ಮ ಪಿಸುಮಾತಿಗೆ ಕಿವಿಯಾದ
ಕಡಲ ಕಿನಾರೆ ಮೌನವ ಹೊದ್ದು ಮಲಗಿತ್ತು.
ನಿನ್ನ ಕಣ್ಣುಗಳಲ್ಲಿ ಅದೇ ಹೊಳಪಿತ್ತು.
ನಾನೂ ಪಾರವಿರದ ಆನಂದದಲ್ಲಿದ್ದೆ;
ಆ… ಕ್ಷಣದ ಮೌನದ ನಂತರ ಇಬ್ಬರೂ
ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೋ… ?

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಹನಿ · ಯಾ ರೂಹಿ ....

ಯಾ ರೂಹಿ ….

Screenshot_2015-01-27-11-39-50

ಯಾ ರೂಹೀ
ಸಂಭಂದಗಳಿಗೆ ಅರ್ಥದ ಮೊದಲು
ಹೆಸರು ಹುಡುಕುವ ಲೋಕ-ಕ್ರಿಯೆಯಲ್ಲಿ
‘ಹುಚ್ಚರು’ ಅಂತನ್ನಿಸಿ ನಗುವ ಬಾ…!
_
ತೋಡಿನ ಮರಳು ಹೆಕ್ಕಿ
ತಟದಲ್ಲೊಂದು ಮನೆ ಮಾಡಿ
ಮನ್ನುಂಡೆ ಮಾಡಿ ಆಟ ಆಡಿದ್ದೆ;
ಅಂಥದ್ದೊಂದೇ ಮರಳ ತಟದಲ್ಲಿ
ನಿನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಪೋಣಿಸಿದಾಗ
ಕಾಲ ಬಸವಳಿದು ನನ್ನ ಕಾಲಡಿ ಬಿದ್ದಿದ್ದ..!
ಅದನೋಡಿ ನೀ ಕಚ್ಚಿ ತಿಂದ ಅರ್ಧ ಚಂದ್ರ ಮೋಡದ
ಮರೆ ಸೇರಿದ್ದು ಈರ್ಷ್ಯೆಯಿಂದಲ್ಲವೇ ರೂಹಿ…? 

_
ಯಾ ರೂಹಿ..
ಆ ಶರಧಿ ತೀರದಲ್ಲಿ ನಿನ್ನ ಹೆಸರು ಬರೆದಿದ್ದೆ ;
ಧಾವಂತದ ಅಲೆಗಳು ಅದನಳಿಸಿದವು;
ಇನ್ನು
ಎದೆ ಬಯಲೊಳಗೆ ಅಲೆಗಳೇಳುವುದಿಲ್ಲ.. !

_

ಯಾ ರೂಹಿ..
ನೀನು ಕನಸುಗಳ ರಭಸಕ್ಕೆ
ಎದೆಯೊಡ್ಡಿ ನಿಂತವನ
ಜೀವನ್ಮುಖಿ ಭಾವಕ್ಕೆ
ಆತ್ಮ ತುಂಬಿದವಳು…

~ಹುಸೇನಿ

Leave a comment