ನೆನಪಿನ ಹನಿ · ಹುಸೇನಿ ಪದ್ಯಗಳು - 19 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 19

nenapina-sanchi-teera

೧)
ಮುತ್ತನ್ನಲ್ಲ ..
ಆ ವಿದಾಯದ ಸಂಜೆ
ಅವಳ ಕಣ್ಣಿಂದ ಜಾರಿದ
ಹನಿಯೊಂದು ತೀರದಲಿ ಬಿದ್ದು ಕಡಲು
ಸೇರಿದೆ, ಅದನಾಯ್ದು ಕೊಟ್ಟರೆ
ಕ್ಷಮಿಸುತ್ತಾಳಂತೆ,
…. ಹುಡುಕುತ್ತಿದ್ದೇನೆ..!
೨)
ಅದೆಷ್ಟು ಕನಸುಗಳನು
ಹೂತಿಟ್ಟಿದ್ದೆ
ನನ್ನೆದೆಯೊಳಗಿಳಿದು…
ಈ ಅಪರಾತ್ರಿಯಲ್ಲಿ ಒಂದೊಂದೇ
ಹೆಕ್ಕಿ ಹೊರಗಿಡುತ್ತೇನೆ..
ಬಣ್ಣವಿಲ್ಲದ್ದು, ರೂಪವಿಲ್ಲದ್ದು,
ರೂಪಾಂತರಗೊಂಡದ್ದು,
ಸತ್ತು ಬಿದ್ದದ್ದು, ಸಾವಿನಂಚಿಗೆ ತಲುಪಿದ್ದು
ಹೀಗೆ…ಎಲ್ಲವನ್ನೂ,
ಈ ಕ್ಷಣ ಎಷ್ಟೊಂದು ನಿರಾಳ ಮನ
ದಿಟ್ಟಿಸುತ್ತೇನೆ ಎವೆಯಿಕ್ಕದೆ- ಅವುಗಳ
ಆರ್ತನಾದ ಮುಗಿಲು ಮುಟ್ಟುತ್ತದೆ
ಕಿವಿಯೇ ಹಾರಿ ಹೋಗುವಷ್ಟು ಚೀತ್ಕಾರ.. !
ಮತ್ತೆ ಒಂದೊಂದನ್ನೇ ಒಳ ತುಂಬಿಸುತ್ತೇನೆ;
ಎದೆಬಿರಿದು ನೊಂದ ನನ್ನ ಕಣ್ಣಿನಲ್ಲಿ ಹರಿದ
ರಕ್ತಸಿಕ್ತ ಒಂದಿಷ್ಟು ಹನಿಗಳು ಮಾತ್ರ ಉಳಿಯುತ್ತದೆ
ಅದನ್ನು ಆರಿಸಿ ಕವಿತೆ ಕಟ್ಟುತ್ತೇನೆ.. !

_ಹುಸೇನಿ

Leave a comment