ವೈದ್ಯರು ಕಳಿಸಿದ ಜೀವನ ಪಾಠ · ಸಣ್ಣ ಕತೆ

ವೈದ್ಯರು ಕಲಿಸಿದ ಜೀವನ ಪಾಠ

Daddy's Hands-Artistic
“ಡಾಕ್ಟರ್! ನಾನೊಂದು ಗಂಭೀರ ಸಮಸ್ಯೆಯಲ್ಲಿ ಸಿಲುಕಿದ್ದೇನೆ.. ನೀವು ಸಹಾಯ ಮಾಡಲೇಬೇಕು… “. ಕನ್ಸಲ್ಟೇಶನ್ ರೂಮಿಗೆ ಧಾವಿಸಿದ ಆಕೆ ವೈದ್ಯರ ಬಳಿ ಅಂಗಲಾಚತೊಡಗಿದಳು. “ನನ್ನ ಮಗುವಿಗಿನ್ನೂ ೧ ವರ್ಷ ತುಂಬಿಲ್ಲ, ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದೇನೆ, ಇಷ್ಟು ಬೇಗ ನನಗಿನ್ನೊಂದು ಮಗು ಬೇಡ ಡಾಕ್ಟರ್ ” ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಆಕೆ ಡಾಕ್ಟರ ಮುಖವನ್ನು ವಿಷಣ್ಣವಾಗಿ ನೋಡುತ್ತಾ ಕುಳಿತಳು.

“ಸರಿ.. ನಾನೇನು ಮಾಡಬೇಕು ಹೇಳಿ” ಡಾಕ್ಟರ್ ಕೇಳಿದರು.
“ನನಗೆ ಈ ಮಗು ಬೇಕಿಲ್ಲ… ಅಬಾರ್ಶನ್ ಮಾಡ್ಬೇಕು.. ನೀವು ಸಹಾಯ ಮಾಡ್ಬೇಕು ಡಾಕ್ಟರ್… ” ಸಣ್ಣ ದನಿಯಲ್ಲಿ ಅವಳು ಉತ್ತರಿಸಿದಳು.
ಡಾಕ್ಟರ್ ಚಿಂತಾಮಗ್ನರಾದರು, ಒಂದಷ್ಟು ಸಮಯದ ಮೌನವನ್ನು ಮುರಿದು ಡಾಕ್ಟರ್ ಹೇಳಿದರು “ಅದಕ್ಕಿಂತಲೂ ಒಳ್ಳೆಯ ಉಪಾಯವಿದೆ ನನ್ನಲ್ಲಿ… ಇದರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಿಲ್ಲ…”.
ಆಕೆಯ ಮುಖ ಅರಳಿತು. ಡಾಕ್ಟರ್ ತನ್ನ ಕೋರಿಕೆಯನ್ನು ಒಪ್ಪಿಕೊಂಡಳೆಂದು ಮತ್ತಷ್ಟು ನಿರಾಳವಾದಳು.

ಡಾಕ್ಟರ್ ಮುಂದುವರೆಸಿದರು “ನೋಡಿ.. ೨ ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳಲು, ಪೋಷಿಸಲು ನಿಮಗೆ ಕಷ್ಟವಿದೆ ಅಂದ್ರಿ.. ಹಾಗಾದ್ರೆ ಒಂದು ಮಗುವನ್ನು ಕೊಲ್ಲಲೇ ಬೇಕು… ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸೋಣ..ಇದರಿಂದ ಮತ್ತೊಂದು ಮಗುವನ್ನು ಪಡೆಯುವ ಮುಂಚೆ ಒಂದಿಷ್ಟು ಕಾಲ ಅರಾಮವಾಗಿರಬಹುದು… ಹೇಗಾದರೂ ಒಂದು ಮಗುವನ್ನು ಇಲ್ಲವಾಗಿಸಲೇಬೇಕು.. ಯಾವ ಮಗುವಾದರೇನಂತೆ ?, ಅಬಾರ್ಶನ್ ಎಂಬುದು ತುಂಬಾ ರಿಸ್ಕಿ, ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸಿದರೆ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಾಗುವುದಿಲ್ಲ…. …. …. ”
“ನೋ ನೋ ಡಾಕ್ಟರ್ !!, ನನ್ನ ಮಗುವನ್ನು ನಾನೇ ಕೊಲ್ಲುವುದಾ..?! ಅಬ್ಬಾ .. ಎಷ್ಟೊಂದು ಕ್ರೂರ !, ಎಷ್ಟೊಂದು ಭಯಾನಕ.. ನಾನದನ್ನು ಮಾಡಲಾರೆ… !”
ಇನ್ನೂ ಮಾತು ಮುಗಿಸದ ಡಾಕ್ಟರನ್ನು ತಡೆದ ಅವಳು ಜೋರುದನಿಯಲ್ಲಿ ಕಂಪಿಸುತ್ತಾ ನುಡಿದಳು, ಅವಳ ಹಣೆ ಬೆವರತೊಡಗಿತ್ತು, ಎದೆ ಬಡಿತ ಜೋರಾಗಿತ್ತು .

“ಓಕೆ ..ಒಕೆ .. ಐ ಅಗ್ರೀಡ್ !”
ಡಾಕ್ಟರ್ ಮಾತು ಮುಂದುವರೆಸಿದರು “ಒಂದು ಮಗುವನ್ನು ನೀವು ಕೊಲ್ಲಲ್ಲು ಒಪ್ಪಿಕೊಂಡಿದ್ದೀರಿ, ಹಾಗಿದ್ದಾಗ ನಿಮ್ಮ ಸಮಸ್ಯೆಗೆ ಇದುವೇ ಒಳ್ಳೆಯ ಪರಿಹಾರವೆಂದುಕೊಂಡೆ .. ಅದಕ್ಕೆ ಹೇಳಿದೆ.. ”

ಆಕೆಗೆ ತನ್ನ ತಪ್ಪಿನ ಅರಿವಾಯಿತು. ನಂತರ ಡಾಕ್ಟರ್ ಗರ್ಭದಲ್ಲಿರುವ ಮಗುವಿಗೂ ಆಕೆಯ ಇನ್ನೊಂದು ಮಗುವಿನಂತೆ ಜೀವವಿದೆ, ಅದನ್ನು ಗರ್ಭಪಾತ ಮಾಡಿ ತೆಗೆಸುವುದು ಕೊಲ್ಲುವುದಕ್ಕೆ ಸಮಾನ … ಅದು ಕೈಯಲ್ಲಿರುವ ಮಗುವನ್ನು ಕೊಂದಷ್ಟೇ ದೊಡ್ಡ ಅಪರಾಧ ಎಂದು ತಿಳಿ ಹೇಳಿದರು.
ದುಖಃದ ಕಟ್ಟೆ ಒಡೆದು ಆ ತಾಯಿ ಕಣ್ಣೀರಾದಳು, ಮಗುವನ್ನು ಎಷ್ಟೇ ಕಷ್ಟಪಟ್ಟರೂ ಹೆತ್ತು ಸಾಕುವುದಾಗಿ ಡಾಕ್ಟರ್ ಬಳಿ ಪ್ರತಿಜ್ಞೆಗೈದು ಭಾರವಾದ ಹೃದಯದೊಂದಿಗೆ ಹೊರಡಲು ಅಣಿಯಾಗುವಾಗ ಲೋಕದ ಸಮಸ್ತ ತಂದೆ-ತಾಯಿಗಳು ಕಲಿಯಬೇಕಾದ ಜೀವನ ಪಾಠವೊಂದನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಳು.

_ಹುಸೇನಿ
ಎಳೆ:ಅಂತರ್ಜಾಲ

Leave a comment