ರಂಝಾನ್ ಪ್ರಾರ್ಥನೆಗಳು

ರಂಝಾನ್ ಪ್ರಾರ್ಥನೆಗಳು

ramzan

1)
ಬೀಜದೊಳಗೆ ಮರವಿಟ್ಟ,
ಹೂವೊಳಗೆ ಸುಗಂದವಿಟ್ಟ ದೊರೆಯೇ..
ಕಸುವು ಮರೆತ ಕಣ್ಣೊಳಗೊಂದಿಷ್ಟು
ಹನಿ ತುಂಬಿಸು,
ಪಾಪವನ್ನೆಲ್ಲ ತೊಳೆದು ನಿನ್ನ ದಾರಿಯ
ಹುಡುಕಬೇಕು…
2)
ರಂಝಾನಿನ ರಾತ್ರಿ,
ಕರಗಳನ್ನೆತ್ತಿ ನಿನ್ನೆಡೆಗೆ ಚಾಚಿದ್ದೇನೆ ದೊರೆಯೇ..
ಎಲ್ಲದಕ್ಕೂ ಮೊದಲಾಗಿ
ಮಾಡಿಟ್ಟ ಪಾಪಗಳ ನೆನೆದು
ತುಂಬುವ ಕಣ್ಣುಗಳನ್ನು ಕೊಡು…
ಬಿರಿಯುವ ಹೃದಯವೊಂದನು ಕೊಡು..
3)
ದೊರೆಯೇ…
ನಿನ್ನ ನಾಮವನ್ನೇ ಮರೆತಿದ್ದೇನೆ
ನಿಂತ ಭೂಮಿ ಕುಸಿಯಲಿ,
ಆಕಾಶ ಕಳಚಿ ಬೀಳಲಿ,
ಕಸುವು ಮರೆತ ನಾಲಿಗೆಯಲ್ಲಿ
ನಿನ್ನ ಹೆಸರನ್ನೊಮ್ಮೆ ಕೂಗಬೇಕು…
4)
ರಂಝಾನಿನಲ್ಲೂ ಕಾಡದ ಹಸಿವು,
ಮರಣ ಮನೆಯಲ್ಲೂ ಕಾಡದ
ಮೃತ್ಯು ಭಯ,
ಇವೆರಡೂ ನನ್ನನ್ನು
ಭಯಭೀತನನ್ನಾಗಿಸಿದೆ ದೊರೆಯೇ..
ಹುಸೇನಿ ~