ಮುಸಾಫಿರ್ ಪದ್ಯಗಳು · ಮುಸಾಫಿರ್ ಪದ್ಯಗಳು – 3

ಮುಸಾಫಿರ್ ಪದ್ಯಗಳು – 3

1.
ಒಂದು ನಿದಿರೆಯಲ್ಲಿ
ಲಕ್ಷ ಬೆಲೆಬಾಳುವ ಔಷಧಿಯಿಟ್ಟ ದೊರೆಯ ಬಳಿ
ಕೊರತೆ ಹೇಳುವೆಯೇಕೆ ..?
ಕರಗು ಕರಗು ನಗುತ್ತಲೇ ಕರಗು
ಚಿನ್ನವಾಗಲು ಕುಲುಮೆಯಲ್ಲಿ ಕರಗುವ ಅದಿರಿನ ಹಾಗೆ,
ಮಲಗು ಮಲಗು ಸುಮ್ಮನೇ ಮಲಗು
ಹಕ್ಕಿಯೊಂದು ದಟ್ಟಡವಿಯಲ್ಲಿ ಪಾಚಿಕೊಂಡ ಹಾಗೆ.

2.
ಈ ನೀರವ ಏಕಾಂತದಲ್ಲೂ
ಅನಾಮಿಕ ಹೂವೊಂದು
ಪರಿಮಳ ಹೊತ್ತು ತರುತ್ತಿದೆ.
ನನ್ನ ಖುದಾ ನನಗಾಗಿ ರಾತ್ರಿ ಹಗಲು
ಏನೆಲ್ಲಾ ಸಿದ್ಧತೆ ಮಾಡಿಡುತ್ತಾನೆ ನೋಡಿ.

3.
“ಭಿಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ”
ಎಂಬ ಬೋರ್ಡಿಗೆ ತಗುಲಿದ ವೆಚ್ಚದಲ್ಲೇ
ಒಂದು ಬಾರಿಯಾದರೂ ಉಣಿಸಬಹುದಿತ್ತು.
ನೀನಾದರೋ ಒಂದು ಅನ್ನದ ಅಗುಳೂ
ಸೃಷ್ಟಿಸಲು ಅರಿಯದೆ ನನ್ನ ದೊರೆಯ ಭಿಕ್ಷೆಯಲ್ಲಿರುವವ.

4.
ದಾಟಿ ಬಂದ ಯಾವ ದಾರಿಯಲ್ಲೂ
ಮುಳ್ಳು ಉಳಿಸಿ ಬರಬೇಡ .
ಬದುಕನ್ನು ದಾಟುವುದೆಂದರೆ
ಹಲವು ದಾರಿಯನ್ನು ಮತ್ತೆ ಮತ್ತೆ ಬಳಸುವುದು.
ಹಾಗಾಗಿ ಮುಳ್ಳು ಉಳಿಸಿ ಬಂದರೆ
ಏನಾದೀತೆಂದು ತುಂಬಾನೇ ಎಚ್ಚರವಿಟ್ಟುಕೋ

-ಮುಸಾಫಿರ್

ಮುಸಾಫಿರ್ ಪದ್ಯಗಳು · ಮುಸಾಫಿರ್ ಪದ್ಯಗಳು – 2

ಮುಸಾಫಿರ್ ಪದ್ಯಗಳು – 2

1.

ಯಾಕಿಷ್ಟೊಂದು ಹಠ ಹುಡುಗೀ,
ಒಂದೊಮ್ಮೆ ನಮ್ಮ ದಿವ್ಯ ಕನಸು
ಪ್ರಸವವಾಗಲೇಬೇಕಿರುವ ಕ್ಷಣದಲ್ಲೂ
ಹೀಗೆ ಹಠ ಹೂಡಿಬಿಟ್ಟರೆ
ಗಂಡಸಿನ ಅಸಹಾಕತೆ ಜಗಜ್ಜಾಹೀರಾಗದೇ ?

2.

ಲಾಲಿ ಹಾಡುವ ಎದೆಯ ಆಸೆಗಳು
ಮಲಗಿ ನಿದ್ರಿಸಲು ನೀನೇ ಬೇಕೆನ್ನುವ
ಸಣ್ಣ ಹಠಕ್ಕೆ ಕಾದು ಕುಳಿತಿದೆ.
ಸದಾ ಹಠಮಾರಿಯಾದ ನೀನು
ಈಗಿದಿಷ್ಟು ಬದಲಾಗಬೇಕಿರಲಿಲ್ಲ..

3.

“ಅಲ್-ವಫಾ” ಬೆಟ್ಟದ ಕುಳಿರಲ್ಲಿ
ವಿರಹದ ಆತ್ಮದ ಬೆವರೊರೆಸಿಕೊಳ್ಳಲು
ನಿದ್ದೆಗೆ ಜಾರುವ ನತದೃಷ್ಟ ಹೆಣ್ಣೇ,
ಸ್ವಲ್ಪ ಗಟ್ಟಿಗೊಳ್ಳು,
ಮರುಭೂಮಿಯಲ್ಲಿ ಕುಳಿರು ವರ್ಷಿಸುವ
ಖುದಾ ನ ಕಡೆಗೆ ಈ ಒರಟನ ಕೈಗಳಿವೆ.

4.

ನಿನ್ನ ಕಾರಣಗಳನ್ನು
ನಾನು ಒಪ್ಪುವುದಿಲ್ಲ
ತಾಯಿ ಬೇರು ಕೀಳುವಾಗ
ಸಣ್ಣ ಸದ್ದೊಂದು ಬಂದೇ ಬರುತ್ತದೆ..

~ಮುಸಾಫಿರ್

ಮುಸಾಫಿರ್ ಪದ್ಯಗಳು · ಮುಸಾಫಿರ್ ಪದ್ಯಗಳು – 1

ಮುಸಾಫಿರ್ ಪದ್ಯಗಳು – 1

1.
ಸದಾ ಅಕ್ಕರೆಯ
ಬೆನ್ನು ತಟ್ಟಿಸಿಕೊಳ್ಳಲು ಬಂದು,
ನನ್ನ ರಾತ್ರಿಗಳನ್ನು ಕಬಳಿಸುವ
ಅಸಹಾಯಕಳೇ ಕೇಳು,
ನನಗೆ ಹಗಲುಗಳಲ್ಲೂ
ಒಂಟಿತನದ ಕೆಲಸವೇ ಇದೆ.

2.
ಒಂದಿಷ್ಟು ಸಕ್ಕರೆಯ ಉಗುಳಿದರೆ
ಅನಾಮತ್ತು ಎರಡು ಹೊತ್ತಿನ
ಕಾಫಿಗಾದರೂ ಆಗುತ್ತಿತ್ತು
ಈ ದಿಕ್ಕೆಟ್ಟ ಬದುಕಿನಲಿ.
ದುರಾದೃಷ್ಟ ಹಿಂಗೂ ಆಯಿತು ನಮ್ಮದು,
ಈಗೀಗ ಉಗುಳುವುದಕ್ಕೂ
ನೀನು ಲೆಕ್ಕಾಚಾರ ಹಾಕತೊಡಗಿದೆ.

3.
ಸಂಜೆವರೆಗೂ ದುಡಿಯುವ ನೀನು
ಇಷ್ಟೊಂದು ಅಕ್ಷರಗಳನ್ನು
ಎಲ್ಲಿಂದ ತರುವೆ ಈ ರಾತ್ರಿಗಳಲ್ಲಿ
ಎಂದು ಚಿಕ್ಕ ಹುಡುಗನೊಬ್ಬ ಕೇಳಿದ;

ಇದು ವಂಚಕರ ನಿರ್ದಯಿಗಳ ದುನಿಯಾದಲ್ಲಿ
ಸಿಗುವ ದಿನಗೂಲಿಯೆಂದು ನಗುತ್ತಲೇ ಹೇಳಿದೆ.

4.
ಅಡ್ಡದಾರಿ ಹಿಡಿಯದೆ
ನಡೆಯುವಾಗ
ಭಯ ಅನ್ನುವುದು
ಅಪರಿಚಿತವಾಗಿಬಿಡುತ್ತದೆ.
ಹಾಗಂತ ಹೆದರುಪುಕ್ಕಲರೆಲ್ಲ
ಅಡ್ದದಾರಿಯಲ್ಲಿ ನಡೆಯುವವರು ಎಂದಲ್ಲ
ಅವರು ಮತ್ತಷ್ಟು ಸತ್ಯದ ದಾರಿಯ ಉಮ್ಮೀದು ಇಟ್ಟುಕೊಂಡವರಿರಲೂಬಹುದು.

~ಮುಸಾಫಿರ್