ಮುಸಾಫಿರ್ ಪದ್ಯಗಳು · ಮುಸಾಫಿರ್ ಪದ್ಯಗಳು – 3

ಮುಸಾಫಿರ್ ಪದ್ಯಗಳು – 3

1.
ಒಂದು ನಿದಿರೆಯಲ್ಲಿ
ಲಕ್ಷ ಬೆಲೆಬಾಳುವ ಔಷಧಿಯಿಟ್ಟ ದೊರೆಯ ಬಳಿ
ಕೊರತೆ ಹೇಳುವೆಯೇಕೆ ..?
ಕರಗು ಕರಗು ನಗುತ್ತಲೇ ಕರಗು
ಚಿನ್ನವಾಗಲು ಕುಲುಮೆಯಲ್ಲಿ ಕರಗುವ ಅದಿರಿನ ಹಾಗೆ,
ಮಲಗು ಮಲಗು ಸುಮ್ಮನೇ ಮಲಗು
ಹಕ್ಕಿಯೊಂದು ದಟ್ಟಡವಿಯಲ್ಲಿ ಪಾಚಿಕೊಂಡ ಹಾಗೆ.

2.
ಈ ನೀರವ ಏಕಾಂತದಲ್ಲೂ
ಅನಾಮಿಕ ಹೂವೊಂದು
ಪರಿಮಳ ಹೊತ್ತು ತರುತ್ತಿದೆ.
ನನ್ನ ಖುದಾ ನನಗಾಗಿ ರಾತ್ರಿ ಹಗಲು
ಏನೆಲ್ಲಾ ಸಿದ್ಧತೆ ಮಾಡಿಡುತ್ತಾನೆ ನೋಡಿ.

3.
“ಭಿಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ”
ಎಂಬ ಬೋರ್ಡಿಗೆ ತಗುಲಿದ ವೆಚ್ಚದಲ್ಲೇ
ಒಂದು ಬಾರಿಯಾದರೂ ಉಣಿಸಬಹುದಿತ್ತು.
ನೀನಾದರೋ ಒಂದು ಅನ್ನದ ಅಗುಳೂ
ಸೃಷ್ಟಿಸಲು ಅರಿಯದೆ ನನ್ನ ದೊರೆಯ ಭಿಕ್ಷೆಯಲ್ಲಿರುವವ.

4.
ದಾಟಿ ಬಂದ ಯಾವ ದಾರಿಯಲ್ಲೂ
ಮುಳ್ಳು ಉಳಿಸಿ ಬರಬೇಡ .
ಬದುಕನ್ನು ದಾಟುವುದೆಂದರೆ
ಹಲವು ದಾರಿಯನ್ನು ಮತ್ತೆ ಮತ್ತೆ ಬಳಸುವುದು.
ಹಾಗಾಗಿ ಮುಳ್ಳು ಉಳಿಸಿ ಬಂದರೆ
ಏನಾದೀತೆಂದು ತುಂಬಾನೇ ಎಚ್ಚರವಿಟ್ಟುಕೋ

-ಮುಸಾಫಿರ್