ಮುಸಾಫಿರ್ ಪದ್ಯಗಳು · ಮುಸಾಫಿರ್ ಪದ್ಯಗಳು – 1

ಮುಸಾಫಿರ್ ಪದ್ಯಗಳು – 1

1.
ಸದಾ ಅಕ್ಕರೆಯ
ಬೆನ್ನು ತಟ್ಟಿಸಿಕೊಳ್ಳಲು ಬಂದು,
ನನ್ನ ರಾತ್ರಿಗಳನ್ನು ಕಬಳಿಸುವ
ಅಸಹಾಯಕಳೇ ಕೇಳು,
ನನಗೆ ಹಗಲುಗಳಲ್ಲೂ
ಒಂಟಿತನದ ಕೆಲಸವೇ ಇದೆ.

2.
ಒಂದಿಷ್ಟು ಸಕ್ಕರೆಯ ಉಗುಳಿದರೆ
ಅನಾಮತ್ತು ಎರಡು ಹೊತ್ತಿನ
ಕಾಫಿಗಾದರೂ ಆಗುತ್ತಿತ್ತು
ಈ ದಿಕ್ಕೆಟ್ಟ ಬದುಕಿನಲಿ.
ದುರಾದೃಷ್ಟ ಹಿಂಗೂ ಆಯಿತು ನಮ್ಮದು,
ಈಗೀಗ ಉಗುಳುವುದಕ್ಕೂ
ನೀನು ಲೆಕ್ಕಾಚಾರ ಹಾಕತೊಡಗಿದೆ.

3.
ಸಂಜೆವರೆಗೂ ದುಡಿಯುವ ನೀನು
ಇಷ್ಟೊಂದು ಅಕ್ಷರಗಳನ್ನು
ಎಲ್ಲಿಂದ ತರುವೆ ಈ ರಾತ್ರಿಗಳಲ್ಲಿ
ಎಂದು ಚಿಕ್ಕ ಹುಡುಗನೊಬ್ಬ ಕೇಳಿದ;

ಇದು ವಂಚಕರ ನಿರ್ದಯಿಗಳ ದುನಿಯಾದಲ್ಲಿ
ಸಿಗುವ ದಿನಗೂಲಿಯೆಂದು ನಗುತ್ತಲೇ ಹೇಳಿದೆ.

4.
ಅಡ್ಡದಾರಿ ಹಿಡಿಯದೆ
ನಡೆಯುವಾಗ
ಭಯ ಅನ್ನುವುದು
ಅಪರಿಚಿತವಾಗಿಬಿಡುತ್ತದೆ.
ಹಾಗಂತ ಹೆದರುಪುಕ್ಕಲರೆಲ್ಲ
ಅಡ್ದದಾರಿಯಲ್ಲಿ ನಡೆಯುವವರು ಎಂದಲ್ಲ
ಅವರು ಮತ್ತಷ್ಟು ಸತ್ಯದ ದಾರಿಯ ಉಮ್ಮೀದು ಇಟ್ಟುಕೊಂಡವರಿರಲೂಬಹುದು.

~ಮುಸಾಫಿರ್