ಮತ್ತೆರಡು ರೂಹಿ ಪದ್ಯ · ಹುಸೇನಿ ಪದ್ಯಗಳು - 29 · ಹುಸೇನಿ_ಪದ್ಯಗಳು

ಮತ್ತೆರಡು ರೂಹಿ ಪದ್ಯ..(ಹುಸೇನಿ ಪದ್ಯಗಳು – 29)

roohi

೧)
ಯಾ ರೂಹಿ…
ನನ್ನ ಉರಿ ಹಂಬಲಗಳ ಹೊಗೆ
ಅಷ್ಟೂ ಮೇಣದ ಬತ್ತಿಗಳ ಬೂದಿ
ಯಾವುದೂ ಈಗ ನೆನಪಾಗುತ್ತಿಲ್ಲ
ಜೀವಕ್ಕೆ ಜೀವ ಜೋತುಬೀಳುವುದನ್ನು
ಕಲಿಯುವಾಗ
ನನ್ನೊಳಗೆ ಮರು ಹುಟ್ಟಿನ ಸಂಭ್ರಮ..
ಈಗ ‘ಬದುಕುತ್ತಿದ್ದೇನೆ’ ಅಷ್ಟೇ… !
೨)
ಯಾ ರೂಹಿ..
ಇಂದೂ ಸಂಜೆಸೂರ್ಯನ ಕಿರಣ ವೈಭವಿಸುತ್ತಿತ್ತು.
ನಮ್ಮ ಪಿಸುಮಾತಿಗೆ ಕಿವಿಯಾದ
ಕಡಲ ಕಿನಾರೆ ಮೌನವ ಹೊದ್ದು ಮಲಗಿತ್ತು.
ನಿನ್ನ ಕಣ್ಣುಗಳಲ್ಲಿ ಅದೇ ಹೊಳಪಿತ್ತು.
ನಾನೂ ಪಾರವಿರದ ಆನಂದದಲ್ಲಿದ್ದೆ;
ಆ… ಕ್ಷಣದ ಮೌನದ ನಂತರ ಇಬ್ಬರೂ
ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೋ… ?

~ಹುಸೇನಿ

Leave a comment