ಬಾ ರಚ್ಚೆ ಹಿಡಿ.. · ಯಾ ರೂಹಿ ....

ಬಾ ರಚ್ಚೆ ಹಿಡಿ..

cute
ಬಾ ರಚ್ಚೆ ಹಿಡಿ.. ಕೋಪ ತೋರ್ಸು.. ಗ್ಲಾಸು ತುಂಬಾ ಹಾಲು ಬೇಕಂತ,ಆ ಚಕ್ಲಿ ಪ್ಯಾಕೆಟಲ್ಲೇ ಬೇಕಂತ, ಹೊಸ ಪ್ಲೇಟಲ್ಲೇ ಊಟ ಕೊಡು ಅಂತೆಲ್ಲಾ ಹಠ ಹಿಡಿ, ನಾ ನಿನ್ನನ್ನೆತ್ತಿ ಮುದ್ದಾಡಲು ಓಡಿ ಬಂದಾಗ ಕೈಗೆ ಸಿಗದೇ ಓಡಿ ಬಾಗಿಲ ಮರೆಯಲ್ಲಿ ನಿಂತು ಕತ್ತೆತ್ತಿ ನೋಡು, ನನ್ನ ಕೂದಲನ್ನು ಹಿಡಿದೆಳೆದು ನೋವು ಮಾಡು, ಮುಖದ ತುಂಬಾ ಪರಚಿ ಬಿಡು, ಕೈಗೆ ಸಿಕ್ಕ ಎಲ್ಲವನ್ನೂ ಬಾಯಿಗೆ ಹಾಕು, ಅಂಗಳದ ಮಣ್ಣು ಕಹಿಯಾದಾಗ ಓಡಿಬಾ, ಬಾಯಿಗೆ ಕೈಹಾಕಿ ತೆಗದು ಬಾಯಿ ತೊಳೆಸಿದಾಗ ಸಕ್ಕರೆ ಡಬ್ಬಕ್ಕೆ ಕೈ ತೋರ್ಸು, ಮಿಲ್ಕ್ ಪೌಡರನ್ನು ಅಡಗಿಸಿಟ್ಟಲ್ಲಿಂದ ತೆಗೆದು ಕೈ ಮುಖದಲ್ಲೆಲ್ಲಾ ಮೆತ್ತು, ಇಲ್ಲದ ಹೊಟ್ಟೆನೋವಿಗೆ ಇಷ್ಟಗಳ ಬಾಯಿ ಮಾಡಿ ಅಳು, ನಾಟಕ ಅಂತ ಗೊತ್ತಿದ್ರು ಹೊಟ್ಟೆಯ ನೇವರಿಸಿ ನಿಯಾಳಿಸುವಾಗ ಮುದ್ದು ಮುದ್ದು ಮುಖ ಮಾಡು, ಖಾರದ ಪದಾರ್ಥ ತಿಂದು ನೀರಿಗಾಗಿ ಓಡೋಡಿ ಬಾ, ಒಂದೇ ಗುಟುಕಿಗೆ ನೀರು ಕುಡಿಯುವಾಗ ಕೆಮ್ಮಿ ನೀರು ಬಾಯಲ್ಲೂ ಮೂಗಲ್ಲೂ ಬರಲಿ.. ಮಧ್ಯ ರಾತ್ರಿ ಸುಮ್ಸುಮ್ನೆ ಅಳು .. ಎಷ್ಟಾದರೂ ನಿಲ್ಲಿಸದೇ…ನಿನ್ನ ಮುದ್ದು ಮುದ್ದು ಮಾಡಿ ಮುತ್ತಿನ ಮಳೆಗೆರಿತೇನೆ… ಕೊನೆಗೆ ಅತ್ತು ಅತ್ತು ಸುಸ್ತಾಗಿ ನನ್ನೆದೆಯಲ್ಲೇ ಮಲಗಿ ಬಿಡು…
ಬಾ.. ಬಾ … ಮಗುವಾಗು ನನಗಿಂದು ನಿನ್ನ ಅಪ್ಪನಾಗುವ ಆಸೆ ಆಗಿದೆ..

ಹುಸೇನಿ~

Leave a comment