ದಿಲ್ಲಿ ಗದ್ದುಗೆ ಆಪ್ ಪಾಲಾಗಲಿ

ದಿಲ್ಲಿ ಗದ್ದುಗೆ ಆಪ್ ಪಾಲಾಗಲಿ..

kej
ಮಾತು.. ಬರಿ ಬಣ್ಣದ ಮಾತುಗಳು ಇನ್ನು ಚಲಾವಣೆಯಾಗುವುದಿಲ್ಲ. ಜನರಿಗೆ ಎಲ್ಲ ಕಾಲದಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ. ಮೋಡಿ ಮಾಡುವ , ಪ್ರಚೋದನಾಕಾರಿ ಹೇಳಿಕೆಗಳು ಮತ್ತು ಸುಳ್ಳು ಅಭಿವೃದ್ದಿಯ ಮಂತ್ರದ ಮೂಲಕ ಇನ್ನೂ ಜನರನ್ನು ಹುಚ್ಚೆಬ್ಬಿಸಲಾಗದು. ಮಾತುಗಳು ಯಾರ ಹೊಟ್ಟೆಯನ್ನು ತುಂಬಿಸುವುದಿಲ್ಲ, ನೊಂದವರ ಕಣ್ಣೀರು ಒರೆಸುವುದಿಲ್ಲ. ಸಾಮಾಜಿಕ, ಆರ್ಥಿಕ ಅಭದ್ರತೆಯಿಂದ ದಿನದೂಡುವ ಒಟ್ಟು ಜನಸಂಖ್ಯೆಯ 42% ಜನರ ಒಪ್ಪೊತ್ತಿನ ಕೂಲಿಗಾಗಿ ಪರಿತಪಿಸುವ ಅಹಾಕಾರವನ್ನು ಈ ಮಾತುಗಳು ಎಳ್ಳಷ್ಟೂ ಶಮನಗೊಳಿಸುವುದಿಲ್ಲ. ಕೊಳೆಗೇರಿಗಳ, ರಾಜಕೀಯ ಹುನ್ನಾರಗಳ ಕೋಮುಗಲಭೆಯಿಂದ ಮನೆ ಮಕ್ಕಳು ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಸಂಕ್ರಾಮಿಕ ರೋಗಗಳಿಗೆ ತುತ್ತಾಗುವ ನಿರಾಶ್ರಿತ ಶಿಬಿರಗಳ ಅಮ್ಮಂದಿರ ಕಣ್ಣೀರಿಗೆ ಈ ಅಬ್ಬರದ ಮಾತುಗಳು ಸಾಂತ್ವನವಾಗುವುದಿಲ್ಲ. ಜಗದೇಕ ಮಾತಿನ ಮಲ್ಲನಿಗೆ ಇಂಥದ್ದೊಂದು ಸ್ಪಷ್ಟ ಸಂದೇಶ ಕೊಟ್ಟ ದೆಹಲಿಯ ಜನತೆಗೆ ಧನ್ಯವಾದಗಳು. ಕೆಜ್ರಿವಾಲ ಎಂಬ ಹೊಸ ರಾಜಕೀಯ ವ್ಯವಸ್ಥೆಯ ಹರಿಕಾರ ಭರವಸೆ ಮೂಡಿಸುತ್ತಾನೆ. ಯಾವ ಜಾತಿ ಧರ್ಮದ ಜಾಡ್ಯಕ್ಕೆ ಜೋತುಬೀಳದ, ಅಂಥಹ ಹಂಗಿನ ಪಾಲುದಾರಿಕೆಯಿಲ್ಲದ ರಾಜಕೀಯ ವ್ಯವಸ್ಥೆಗೆ ಮುನ್ನುಡಿ ಬರೆಯಿತ್ತಿದ್ದಾನೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ನಮ್ಮ ಸಂವಿಧಾನದ ಮೂರು ಕಂಬಗಳು ಧರ್ಮ ನಿರಪೇಕ್ಷತೆಯನ್ನು ಸಾರುವವಂಥ ನನ್ನ ಕನಸಿನ ಭಾರತ ಚಿಗುರುತ್ತಿದೆ ಅನ್ನಿಸುತ್ತಿದೆ.

~ಹುಸೇನಿ

Leave a comment