ಓ ಮನುಷ್ಯಾ ! ಇದು ನಿನಗೊಂದು ಎಚ್ಚರಿಕೆಯ ಕರೆಗಂಟೆ..!

ಓ ಮನುಷ್ಯಾ ! ಇದು ನಿನಗೊಂದು ಎಚ್ಚರಿಕೆಯ ಕರೆಗಂಟೆ..!

ಎಲ್ಲಡಗಿ ಹೋಯಿತು ನಿನ್ನ ಸೊಕ್ಕು? ಎಲ್ಲಿ ಸೋರಿ ಹೋಯಿತು ನಿನ್ನ ದಾರ್ಷ್ಠ್ಯತನ? ಎಲ್ಲಿ ಹೋಯಿತು ಪರ್ವತ ಪತಾಕೆಯ ಮೇಲೂ ಹೂಂಕರಿಸುವ ನಿನ್ನ ಸಿಂಹಾಸನ ?. ಜಗತ್ತನ್ನೇ ಗೆಲ್ಲುತ್ತೇನೆ ಎನ್ನುವ ನಿನ್ನ ದರ್ಪ ಎಲ್ಲಿ ಸೊಲ್ಲಡಗಿ ಹೋಯಿತು ?. ನಿನ್ನ ಹಿಂಬಾಲಕ ಪಡೆಯೊಂದಿಗೆ ನೀ ಕಟ್ಟಿದ ಸೈನ್ಯ ಸಾಮ್ರಾಜ್ಯಗಳು ಎಲ್ಲಿ ಹೋದವು? ನಿನ್ನ ಒಕ್ಕೂಟಗಳು ಮತ್ತು ಪ್ರತಿಷ್ಠಾನಗಳು ಏನಾದವು?.

ಮನುಷ್ಯ … ಚಂದ್ರನನ್ನು ತನ್ನ ಕಾಲಡಿಗೆ ತಂದ, ಮಂಗಳಕ್ಕೂ ದಾಪುಗಾಲಿಟ್ಟ ಮನುಷ್ಯ .. ! ಈ ಪ್ರಪಂಚದ ಎಲ್ಲವನ್ನೂ ತನ್ನ ಕೈಕುಣಿಕೆಯ ಒಳಗೆ ಆಟವಾಡಿಸುವ ಮನುಷ್ಯ .. ಅಪ್ಪಟ ಕಾಡುಪ್ರಾಣಿಗಳನ್ನು ಪಳಗಿಸಿದ ತನ್ನ ದಾಸ್ಯಕಿಟ್ಟ, ಜಗದ ಅತ್ಯಂತ ಎತ್ತರದ ಪರ್ವತದ ಮೇಲೆ ಪತಾಕೆ ಹಾರಿಸಿದ, ಭೂ ಪದರದ ಸಂಪನ್ಮೂಲ ಕೊಳ್ಳೆ ಹೊಡೆದು ಸಾಮ್ರಾಜ್ಯ ಕಟ್ಟಿದ ಮನುಷ್ಯ.. ತನ್ನಂತೆಯೇ ಯಂತ್ರ ಮಾನವನನ್ನ ನಿರ್ಮಿಸಿ ಅದಕ್ಕೆ ಬುದ್ಧಿಮತ್ತೆಯನ್ನು ತುಂಬಿದ ಮನುಷ್ಯ. 100 ಕಿ.ಮೀಟರ್‌ನಷ್ಟು ದೊಡ್ಡದಾದ ನಗರವನ್ನು ಕೆಲವೇ ನಿಮಿಷಗಳಲ್ಲಿ ಬೂದಿ ಮಾಡಬಹುದಾದ ಹೈಡ್ರೋಜನ್ ಬಾಂಬುಗಳ, ಅಣ್ವಸ್ತ್ರಗಳ, ಕ್ಷಣಾರ್ಧದಲ್ಲಿ ಸಿಡಿಯುವ ಕ್ಷಿಪಣಿಗಳಿಂದ, ಸರಿಸಾಟಿಯಿಲ್ಲದ ಮಿಸೈಲ್ಗಳಿಂದ ದಂಡೆತ್ತಿ ಭೂಮಿಯನ್ನೂ, ಸಾಗರವನ್ನೂ ಗಡಿಯಿಟ್ಟು ಅದರ ಅಧಿಕಾರವನ್ನೂ ಸಂಪತ್ತನ್ನೂ ಹಂಚಿಕೊಂಡ, ಕಿತ್ತುಕೊಂಡ ಮನುಷ್ಯ.. ಬಂದೂಕು ನಳಿಕೆಯ ತುದಿಯಲ್ಲಿ ಬಲಹೀನರ ಮೇಲೆ ಪಾರಮ್ಯ ಮೆರೆದ ಮನುಷ್ಯ.. ಕಪ್ಪಾದ ತನ್ನದೇ ಮನುಷ್ಯ ವರ್ಗವನ್ನು ಕಬ್ಬಿಣದ ಬೋನೊಳಗೆ ತುಂಬಿಸಿ ಟಿಕೆಟ್ ದರವಿಟ್ಟು ಮನೋರಂಜನೆ ಹೆಸರಲ್ಲಿ ವರ್ಣ ಶ್ರೇಷ್ಠತೆ ಮೆರೆದ ವಿಕೃತ ಹುಮ್ಮಸ್ಸಿನ ಹೀನ ಮನುಷ್ಯ.. ಎಲ್ಲಡಗಿ ಹೋಯಿತು ನಿನ್ನ ಸೊಕ್ಕು? ಎಲ್ಲಿ ಸೋರಿ ಹೋಯಿತು ನಿನ್ನ ದಾರ್ಷ್ಠ್ಯತನ? ಎಲ್ಲಿ ಹೋಯಿತು ಪರ್ವತ ಪತಾಕೆಯ ಮೇಲೂ ಹೂಂಕರಿಸುವ ನಿನ್ನ ಸಿಂಹಾಸನ ?. ಜಗತ್ತನ್ನೇ ಗೆಲ್ಲುತ್ತೇನೆ ಎನ್ನುವ ನಿನ್ನ ದರ್ಪ ಎಲ್ಲಿ ಸೊಲ್ಲಡಗಿ ಹೋಯಿತು ?. ನಿನ್ನ ಹಿಂಬಾಲಕ ಪಡೆಯೊಂದಿಗೆ ನೀ ಕಟ್ಟಿದ ಸೈನ್ಯ ಸಾಮ್ರಾಜ್ಯಗಳು ಎಲ್ಲಿ ಹೋಯಿತು? ನಿನ್ನ ಒಕ್ಕೂಟಗಳು ಮತ್ತು ಪ್ರತಿಷ್ಠಾನಗಳು ಏನಾದವು?. ನೆಲವನ್ನೂ, ಕಾಡನ್ನೂ, ಕಡಲನ್ನೂ ಬಗೆದು ನೀ ಸಾಧಿಸಿದ ಯಜಮಾನಿಕೆ ಇಂದು ನಿನ್ನ ಬಲಹೀನತೆಯ ಅಣಕವಾಯಿತೋ?.

ಓ ಮನುಷ್ಯಾ ! ಇದು ನಿನಗೊಂದು ಎಚ್ಚರಿಕೆಯ ಕರೆಗಂಟೆ. ನೀನು ಈ ಭೂಮಂಡಲದ ಸಹ ಜೀವಿಯೇ ಹೊರತು ಯಜಮಾನನಲ್ಲ. ಅಖಿಲಾಂಡಕೋಟಿ ಬ್ರಂಹಾಂಡದ ಚರಾಚರ ವಸ್ತುಜೀವ ಸಂಕುಲದಲ್ಲಿ ನೀನು ಒಂದು ಪ್ರಬೇಧ ಮಾತ್ರ. ಭೂಮಿಯ ಮೇಲೆ ನಿನಗಿರುವಷ್ಟೇ ಹಕ್ಕು ಆ ಇರುವೆಗಳಿಗೂ ಇದೆ, ಹಕ್ಕಿಗಳಿಗೂ ಇದೆ. ಪ್ರಕೃತಿಯ ಸಮತೋಲನ, ಜೈವಿಕ ವೈವಿಧ್ಯತೆ ಮತ್ತು ಅದರ ಸ್ಥಿರತೆ ಈ ಭೂಮಿಯ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಕೊರೊನಾದಿಂದಾಗಿ ಕಂಗೆಟ್ಟು ನಿಂತಿರುವ ಇಟಲಿಯೊಳಗೆ ಪ್ರಕೃತಿ ನಳನಳಿಸಲು ಆರಂಭಿಸಿದೆ. ಸದಾ ಹಡಗು, ಕ್ರೂಸರ್ ಗಳಿಂದ ತುಂಬಿರುತ್ತಿದ್ದ ಸಾರ್ಡಿನಿಯಾ ಕಾಲುವೆಯಲ್ಲೀಗ ಡಾಲ್ಫಿನ್ ಗಳು ನರ್ತಿಸುತ್ತಿವೆ. ಪ್ರವಾಸಿಗರಿಂದ ಸದಾ ಗಿಜಿಗಿಡುತ್ತಿದ್ದ ಸಿಂಗಾಪುರ್ ನ ಸಮುದ್ರದಂಚಿನ ಬೀದಿಗಳು ಮತ್ತು ಬೀಚ್ ಗಳಲ್ಲಿ ನೀರು ನಾಯಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿವೆ. ತಮ್ಮ ಮೂಲ ಹಾರಾಟ ಕೇಂದ್ರಗಳು ವಿಮಾನ ನಿಲ್ದಾಣಗಳಾಗಿ ಬದಲಾದ ಕಾರಣದಿಂದ ಏರ್ ಪೋರ್ಟ್ ಪ್ರದೇಶಗಳಲ್ಲಿ ಹಾರಾಟವನ್ನು ನಿಲ್ಲಿಸಿದ್ದ ಈಜಿಪ್ಟ್ ನ ಬಾತುಗಳು ಮರಳಿ ಅಲ್ಲೇ ಪ್ರತ್ಯಕ್ಷವಾಗಿವೆ. ವಿಮಾನ ಹಾರಾಟ ಸ್ಥಗಿತಗೊಂಡಿರುವ ಕಾರಣದಿಂದಾಗಿ ರನ್ ವೇ ನಲ್ಲಿ ಈಜಿಪ್ಟ್ ಬಾತುಗಳು ನಿರ್ಭೀತಿಯಿಂದ ಪರಿವಾರ ಸಮೇತವಾಗಿ ಓಡಾಡುವಂತಾಗಿದೆ. ಗಂಗಾ ನದಿ ಸ್ವಚ್ಛವಾಗುತ್ತಿದೆ. 200 ಕಿಲೋಮೀಟರ್ ದೂರಕ್ಕೆ ಹಿಮಾಲಯನ್ ಪರ್ವತಗಳು ಗೋಚರಿಸುವಷ್ಟು ಅಗಸ ಶುಭ್ರವಾಗಿದೆ.
ಒಟ್ಟಿನಲ್ಲಿ ಸಾರಾಂಶ ಇಷ್ಟೇ .. ಜಗತ್ತು ಒಂದು ನಿಯಮಕ್ಕೆ ಅಧೀನವಾಗಿದೆ. ಅದನ್ನು ಮೀರುವ ಅಧಿಕಾರ ಯಾರಿಗೂ ಇಲ್ಲ. ಈ ಅಲಿಖಿತ ನಿಯಮಗಳನ್ನು ಮನುಷ್ಯ ಮೀರಿರುವುದರ ಪರಿಣಾಮವಾಗಿಯೇ ಇದೆಲ್ಲವೂ ಸಂಭವಿಸುತ್ತಿವೆ. ಮನುಷ್ಯನ ಅತಿಕ್ರಮಣದಿಂದಾಗಿ ಪ್ರಾಣಿ-ಪಕ್ಷಿಗಳು ತಮ್ಮ ಮೂಲ ನೆಲೆಗಳಿಂದ ದೂರ ಸರಿದು ನಿಂತಿವೆ. ಇದನ್ನು ಹೇಳುವುದಕ್ಕಾಗಿಯೇ ಕೊರೋನಾ ಎಂಟ್ರಿಕೊಟ್ಟ ಹಾಗಿದೆ.

~ ಹುಸೇನಿ