ಅಚ್ಛೇ ದಿನ್ · ತೊರೆಯ ತೀರದ ನೆನಪುಗಳು

ಅಚ್ಛೇ ದಿನ್

hakeem'

ಮುಂಜಾವಿಗೆ ಒಮ್ಮೆ ಎದ್ದು ಆಮೇಲೆ ಮಲಗಿದರೆ ಮತ್ತೆ ಎದ್ದೇಳಲು ಅಮ್ಮ ಬಂದು ಫ್ಯಾನ್ ಆಫ್ ಮಾಡಿ ಒಂದು ಒದಿಬೇಕು ಇಲ್ಲಾ ರಗ್ಗನ್ನೆತ್ತಿ ಬಿಸಾಡಬೇಕು.. ದಿನವೆಲ್ಲಾ ಅಮ್ಮನ ಹಿಂದೆ ಮುಂದೆ ಅಲೆಮಾರಿಯಾಗುವುದು, ಮನಸ್ಸಾದರೆ ತೋಟಕ್ಕೆ ಹೋಗಿ ಅಡಿಕೆ ಹೆಕ್ಕುವುದು.. ಮನೆಯಿಂದ ಹೊರಬಿದ್ದರೆ ನನ್ನ ಹೆಜ್ಜೆಯನ್ನು ಇನ್ನೂ ಜೀವಂತವಾಗಿರಿಸಿದ ಕಾಲುದಾರಿಗಳು, ಆ ತೊರೆ, ಮನೆಯ ಹಿಂದಿನ ಗುಡ್ಡದಲ್ಲೆಲnanuಲ್ಲಾ ಅಲೆದಾಟ, ಸಂಜೆ ಆಟ, ಊರಿನ ಪ್ರತೀ ಕಾರ್ಯಕ್ರಮದಲ್ಲಿ ಸಜೀವ ಸಾನಿಧ್ಯ!, ಎರಡನೇ ಮಹಡಿಯ ಒಂದು ಮೂಲೆಯಲ್ಲಷ್ಟೇ ಸಿಗುವ ಏರ್ಟೆಲ್ ನೆಟ್ವರ್ಕ್ ನಿಂದಾಗಿ ನಿಮ್ಮ ‘ಅಂತರ’ಜಾಲ ಪ್ರಪಂಚದಿಂದ ಸ್ವಲ್ಪ ದೂರ ದೂರ.. ಜೊತೆಗೆ ಒಂದಿಷ್ಟು ಹೆಗಲೇರಿಸಿಕೊಂಡ ಜವಾಬ್ದಾರಿಗಳು.. ಇದು ಸದ್ಯದ ನನ್ನ ದಿನಚರಿ … ಬದುಕು ಮತ್ತೆ ಹರಳುಗಟ್ಟಲು ಇನ್ನೇನು ಬೇಕು ಹೇಳಿ ?

ಅದರಲ್ಲೂ ನಿನ್ನೆಯ ದಿನ ನನ್ನ ಪಾಲಿಗೆ ಅತೀವ ಖುಷಿ ಕೊಟ್ಟಿತು. 7ನೇ ತರಗತಿವರೆಗೆ ಊರ ಗುಡ್ಡದ ಸರಕಾರೀ ಶಾಲೆಯಲ್ಲಿ ಅವಿನಾಭಾವವಾಗಿ ಬೆಸೆದುಕೊಂಡ 8 ಮಂದಿ ಗೆಳೆಯರಲ್ಲಿ ಒಬ್ಬನ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ. 6 ಮಂದಿಗೆ ಈಗಾಗಲೇ ಮದುವೆಯಾಗಿದ್ದಾರೂ ಕೇವಲ ಒಬ್ಬನ ಮದುವೆಗಷ್ಟೇ ಹೋಗಲು ಸಾಧ್ಯವಾಗಿತ್ತು. ಸೇರಿದ್ದ ಮಿಕ್ಕ ಗೆಳೆಯರೊಡನೆ ‘ಪುರಾತನ’ ಕಾಲದ ಮೆಲುಕುಗಳು ಮತ್ತಷ್ಟು ಮಗುತನವನ್ನು ನನ್ನೊಳಗೆ ತುಂಬಿ ಅನಿರ್ವಚನೀಯ ಖುಷಿಯನ್ನು ಮೊಗೆದು ಕೊಟ್ಟಿತು..

ದೂರದೂರಿನ ಸಾಫ್ಟ್ವೇರ್ ಬದುಕು ಮತ್ತೆ ಕರೆಯುವವರೆಗೆ ಅಮ್ಮನ ಮಡಿಲ ಮಗುವಾಗಬೇಕು… ಅಲ್ಲಿವರೆಗೆ ನಿಮ್ಮ ‘ಅಂತರ’ ‘ಜಾಲ’ದಿಂದ ಸ್ವಲ್ಪ ದೂರವೇ ..

ಹುಸೇನಿ ~

Leave a comment