ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ ... · ತೊರೆಯ ತೀರದ ನೆನಪುಗಳು · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …


“ನಿನ್ನ ಒಂದಿಷ್ಟು ಶೂನ್ಯ ತಾ.. ನನ್ನೊಂದಿಷ್ಟು ಏಕಾಂತ ತರುವೆ.. ಮೌನದಿಂದಲೇ ಈ ಸ್ನೇಹಕ್ಕೊಂದು ಸೂರು ಕಟ್ಟೋಣ ಆಗದೇ… ?”

ನಿನ್ನ ಈ ಸಾಲು ಓದಿದಾಗೆಲ್ಲ ಈ ಜಗದ ಮಾನಸಿಕ ಅಪರಿಚಿತತೆಯ ಮೆಟ್ಟಿ ನಿಂತು ಎದ್ದು ಬಿದ್ದು ಅಂಬೆಗಾಲಿಕ್ಕುವ ಮಗುವಿನ ಜೀವನೋತ್ಸಾಹದಂತೆ, ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ಸಂಭ್ರಮಿಸುತ್ತೇನೆ. ಅಲ್ಲೆಲ್ಲೊ ಭೋರ್ಗರೆವ ಶರಧಿಯ ನಡುವೆ ನಿರ್ಲಿಪ್ತ ಏಕಾಂಗಿ ದ್ವೀಪವಾಗಿದ್ದೆ ನಾನು. ನನ್ನೊಳಗೆ ನಾನೇ ಕಟ್ಟಿಕೊಡ ಜಗತ್ತು ಅದು. ಯಾವ ಹಂಗೂ ಇಲ್ಲ, ಮುಂಜಾನೆಯ ವಿಭಾಕಿರಣಗಳು, ಮುಸ್ಸಂಜೆಯ ಮೆಲುಗಾಳಿ, ಅಮವಾಸ್ಯೆಗಳೂ ಹುಣ್ಣಿಮೆಗಳೂ ನನ್ನೊಳಗೆ ಯಾವುದೇ ವಿಶೇಷ ತರಂಗವನ್ನು ಸೃಷ್ಟಿಸುತ್ತಿರಲಿಲ್ಲ. ಕಿನಾರೆಯಲ್ಲಿ ನಿಂತು ಶರಧಿಯನ್ನು ಮುತ್ತಿಕ್ಕುವ ಆಗಸದ ಆ ಅನಂತ ಬಿಂದುವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದೆ. ಹಾಗೆ ದಿಟ್ಟಿಸುವಾಗೆಲ್ಲ ಭಾವ ಬಂಧಗಳಿಗೆ ತೆರೆದುಕೊಂಡು ಬದುಕಿAlone-Boy-In-Love-Wallpaperನ ಅರ್ಥ ಕಂಡುಕೊಳ್ಳಬೇಕೆಂಬ ತಹತಹಿಕೆ ನನ್ನೊಳಗೆ ಒತ್ತರಿಸಿ ಬರುತ್ತಿತ್ತು.. ಅದು ಅಷ್ಟು ಸುಲಭವಲ್ಲ… ನಾನೆಂಬುದು ಬರಿಯ ಗೋಜಲಿನ ಮೂಟೆ, ನಾನೇನು..? ನನ್ನ ಅಸಿತ್ವವೇನು..? ಎಲ್ಲವೂ ದ್ವಂದ್ವ. ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ ರಾತ್ರಿಯೂ ಅಲ್ಲದ, ಹಗಲೂ ಅಲ್ಲದ, ನಿದಿರೆಯೂ ಅಲ್ಲದ, ಎಚ್ಚರವೂ ಅಲ್ಲದ, ಅದೊಂದು ತ್ರಿಶಂಕು ಮನಸ್ಥಿತಿ. ನನ್ನ ತವಕ ತಲ್ಲಣಗಳು, ಅನುಮಾನಗಳು, ಆತಂಕಗಳು, ಅತಿರೇಕಗಳು, ಅನುಭವಗಳು, ಅನುಭಾವಗಳು ಇದೆಲ್ಲವನ್ನೂ ನನ್ನನ್ನು ಮತ್ತಷ್ಟು ಅಯೋಮಯವಾಗುಸುತ್ತದೆ. ನನ್ನ ಹಾಗೆ ಯೋಚಿಸುವ, ನನ್ನದೇ ಬಡಿತದ ಲಯದಲ್ಲಿ, ತಾಳದಲ್ಲಿ ಹೃದಯ ಬಡಿತವಿರುವ ಯಾರಾದರೂ ಇರಬಹುದೇ ಎಂಬ ನನ್ನ ಜಿಜ್ಞಾಸೆಗೆ ಉತ್ತರ ಸಿಗಲಾರದೆ ಪರಿತಪಿಸುತ್ತಿದ್ದೆ.

TOPSHOTS Pakistani children play near the Ravi river in Lahore on April 6, 2015. AFP PHOTO / Arif ALIArif Ali/AFP/Getty Images

ಕಾಲ ಎಲ್ಲದಕ್ಕೂ ಉತ್ತರವಾಗಿ ಬಂತು. ನೀ ನನಗೆ ಸಿಕ್ಕಿದೆ, ಅಲ್ಲ ನನಗೆ ನಾ ದಕ್ಕಿದೆ. ನಿನ್ನದೇ ಮಾತಿನಲ್ಲಿ ಹೇಳಬೇಕಾದರೆ ಒಂದಿನಿತು ಸ್ನೇಹದಾಸೆ ನಮಗಾಗಿ ಹೊಸ ಜಗತ್ತನ್ನೇ ತೆರೆದಿಟ್ಟಿತು, ಮೆಚ್ಚುಗೆ, ಪ್ರೀತಿ, ಮಮಕಾರ, ಹವ್ಯಾಸ, ಇಷ್ಟಗಳು ಎಷ್ಟೊಂದು ಸಾಮ್ಯತೆ.. !. ಇನ್ನಿಲ್ಲದಂತಹಾ ಆತ್ಮೀಯತೆ, ಹಿಂದೆಂದೂ ಕಂಡರಿಯದ ನನ್ನೊಂದಿಗೇ ನನ್ನ ನಂಟು, ಭಾವನಾ ಲೋಕದಲ್ಲಿ ವಿಹರಿಸುತ್ತಿದ್ದರೂ ವಾಸ್ತವದಲ್ಲಿ ಒಂದಾಗುವ ಹೃದಯದ ಮಿಡಿತ, ಮಾತುಗಳಲ್ಲಿರದ ಆಕರ್ಷಣೆ ಆ ಮೌನ ಆರ್ದ್ರ ನೋಟಗಳಲ್ಲಿ ಕಂಡುಬರುವುದೇನು ಸಾಮಾನ್ಯವೇ ವಿಷಯವೇ..?. ಕೆಲವೊಂದು ಸಲ ನಿನ್ನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ ಉಂಟುಮಾಡುತ್ತದೆ. ಹೀಗೆ ನಿನ್ನ ಮಾತಿಗೆ ಒಮ್ಮೆ ಆಶ್ಚರ್ಯ ಪಡುತ್ತ, ಬೆರಗಾಗುತ್ತ, ಮತ್ತೊಮ್ಮೆ ಆ ಮಾತು ನನಗೆ ಪ್ರಶ್ನೆಯಾಗುತ್ತ ಮಗದೊಮ್ಮೆ ಉತ್ತರವಾಗುತ್ತ ಎಷ್ಟೋ ಸಲ ಆ ಮಾತಿಗೆ ನಾನೇ ಭಾವವಾಗುತ್ತಾ ನನ್ನ ಮುಗ್ಧ ಪ್ರಪಂಚ ವಿಸ್ತಾರವಾಗುತ್ತಿದೆ. ಕೆಲವಕ್ಷರಗಳ ಸಂದೇಶಕ್ಕೆ ಇಡೀ ಜೀವಿತವನ್ನೇ ತೆರೆದಿಡುವ ಶಕ್ತಿ, ಹೃದಯದೊಂದರ್ಧ ಚಡಪಡಿಸಿದಾಗ ಮತ್ತೊಂದರ್ಧ ದಲ್ಲಿ ಏನೋ ತಳಮಳ, ಒಂದರ ನೋವು ಮತ್ತೊಂದು ಕಣ್ಣಲ್ಲಿ ನೀರು ತರಿಸುವುದೇಕೋ, ಇಲ್ಲಿ ಬಾಹ್ಯ ಮಿಲನವೇ ಇಲ್ಲ ಅದರ ವಾಂಛೆಯೂ ಇಲ್ಲ,ಆತ್ಮಗಳ ವಿರಹದ ಬೇಗೆ ಮಾತ್ರ ಸುಡುವಂತಿದೆ, ಇಹದ ಮಿಲನದ ಹಂಗಿಲ್ಲದವರ ಸಾಲಲ್ಲಿ ಶೂನ್ಯ ಏಕಾಂತದ ಜೊತೆಯಾಗಿದೆ, ಭಾವನೆಗಳ ಮಿಲನ ಹೃದಯಕ್ಕೆ ನಿಷ್ಕಳಂಕ ಸ್ನೇಹದ ಗರ್ಭದಾನ ಮಾಡಿ, ಭಾವಲೋಕದಲ್ಲೊಂದು ಮುಗ್ಧ ಶಿಶು ಜನಿಸಿದೆ…!

atma-sangatha-criket

ಆ ಶಿಶು ನಮ್ಮೊಳಗಿನ ಅನೂರವಾದ ಸ್ನೇಹ. ನಿನಗೆ ಗೊತ್ತಾ… ? ನನ್ನನ್ನು ನಿನ್ನನ್ನೂ ಹುಟ್ಟಿನಿಂದಲೇ ಬೆಸೆಯಲಾಗಿತ್ತು. ನಿನ್ನದೇ ಮುಂದುವರಿಕೆ ನಾನು ಅಥವಾ ನನ್ನದೇ ಮುಂದುವರಿಕೆ ನೀನು.. ಅಂದು ನಿಮ್ಮೂರಲ್ಲಿ ಸಿಹಿ ಹಂಚಲಾಗಿತ್ತು. ನಿನ್ನಪ್ಪ ರಾಜಗಾಂಭೀರ್ಯದಿಂದ ರಾಜಕುಮಾರಿಯನ್ನು ದಿಟ್ಟಿಸಿ ಸಂಭ್ರಮಪಟ್ಟಿದ್ದ. ನಮ್ಮನೆಯಲ್ಲೂ ಅಷ್ಟೇ, ಅಜ್ಜಿಗೆ ಮೊದಲ ಮೊಮ್ಮಗ, ಸಿಹಿ ಹಂಚಿದ ಅಪ್ಪನ ಮೊಗದ ಮಂದಹಾಸದಲ್ಲೊಂದು ಅನುಶ್ವರವಾದ ಸಂತಸವೊಂದಿತ್ತು. ನೀನು ನನಗಿಂತಲೂ ಮುಂಚೆ ಅಂಬೆಗಾಲಿಡಲು, ದೇಕಲು, ಕುಳಿತುಕೊಳ್ಳಲು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯಲು ಆರಂಭಿಸಿದ್ದೆ. ಆಮೇಲೆ ಶಾಲೆ ಮದ್ರಸಾ.. ನಮ್ಮೆಲ್ಲ ಮಗುತನವ ಕೊಂಚ ಕೊಂಚವೇ ಕಳೆದುಕೊಳ್ಳಲು ಆರಂಭವಾಯ್ತು. ನಾನು ಸ್ಕೂಲ್ ಕಳ್ಳ, ಊರ ಗುಡ್ಡದ ಮೇಲಿನ ಸರ್ಕಾರಿ ಶಾಲೆ ನಂಗೆ ಅವಾಗ ಭೂತ ಬಂಗಲೆ. ಒಂದನೇ ತರಗತಿಗೆ ಹೋದದ್ದೇ ಕಮ್ಮಿ. ಅಮ್ಮ ಎಷ್ಟು ಸಲ ಅಟ್ಟಾಡಿಸ್ಕೊಂಡು ಹೋಗಿದ್ರು ಗೊತ್ತ?. ಹಾಗೆ ಓಡಿಸುವಾಗ ದಾರಿ ಬದಿಯ ಬಳ್ಳಿ ಗಿಡದ ಬೆತ್ತದ ರುಚಿ ತೀರ ರುಚಿಸುತ್ತಿರಲಿಲ್ಲ. ನೀನು ಅಷ್ಟೇ ಪೆಚ್ಚು ಮೊರೆ ಹಾಕಿ ಇಷ್ಟಗಲ ಬೊಚ್ಚುಬಾಯಿ ಅಳು, ಅಮ್ಮನಿಂದ ಬೆನ್ನಿಗೆರಡು ಸಿಕ್ರೇನೆ ಶಾಲೆ ದಾರಿ ನೆನಪಾಗೋದು.

atma-sangatha-scooterನಿನ್ನ ಮದ್ರಸಾ ಉಸ್ತಾದರ ಕೈಯಲ್ಲಿ ನಿಮ್ಮಪ್ಪ ಕೊಟ್ಟ ನಾಗರ ಬೆತ್ತ ನಿನಗೆ ದಿಗಿಲು ಹುಟ್ಟಿಸುತ್ತಿತ್ತು. ಅರ್ದ ಉರು ಹೊಡೆದ ಪಾಠಗಳನ್ನೂ ಕನವರಿಸುತ್ತಿದ್ದೆ ಅಂತ ನಿನ್ನಮ್ಮ ಹೇಳ್ಕೊಳ್ತಾ ಇದ್ರು. ಶಾಲೆಯಿಂದ ಬರುವಾಗ ಇದ್ದ ಸಿಟ್ಟೆಲ್ಲ ದಾರಿಯಲ್ಲಿರುವ ಕಮ್ಮ್ಯುನಿಷ್ಟ್ ಗಿಡದ ಮೇಲೆ ತೀರಿಸ್ಕೊಳ್ತಿದ್ವಿ. ಒಂದು ಬೆತ್ತ ಹಿಡಿದು ಓದಿದ್ಯಾ..? ಉತ್ತರಕೊಡು.. ಅಂತ ಪ್ರಶ್ನೆ ಕೇಳಿ ಅದರ ತಲೆ ಹಾರಿಸ್ತಿದ್ದೆವು. ಕೋಪ ಹೆಚ್ಚಿದರೆ ಅದು ನುಚ್ಚು ನೂರು. ಮನೆಗೆ ತಲುಪಿದವಳೇ ಆಡು ಮರಿಯನ್ನೆತ್ತಿ ಮುದ್ದು ಮಾಡಿ ಮಡಿಲಲ್ಲಿ ಕುಳ್ಳಿರಿಸಿ ತಲೆ ನೇವರ್ಸ್ತಿದ್ದೆ. ನಾನಿಲ್ಲಿ ನನ್ನ ಮುದ್ದು ಬೆಕ್ಕು ಮರಿಗೆ ಹಾಲೆರಿತಿದ್ದೆ. ಅದು ಕಣ್ಣು ಮುಚ್ಚಿ ಕುಡಿಯೋದನ್ನ ನೋಡುವುದೇ ಸಂಭ್ರಮ. ಆಮೇಲೆ ಚಿಣ್ಣಿ – ದಾಂಡು, ಲಗೋರಿ, ಕ್ರಿಕೆಟ್, ನಿನ್ನ ಕುಂಟೆ ಬಿಲ್ಲೆ, ಜೋಕಾಲಿ, ಹೆಸರು ಗೊತ್ತಿಲ್ಲದ ಆ ಕೈಯಲ್ಲೇ ಕಲ್ಲನ್ನು ಆಡಿಸುವ ಆಟ, ಸ್ಟಾಚ್ಯೂ, ಕಲರ್ ಕಲರ್ ವಾಟರ್ ಕಲರ್, ಕಳ್ಳ ಪೋಲಿಸ್, ಮನೆಯಿಂದ ಕದ್ದು ತಿಂದ ಮಿಲ್ಕ್ ಪೌಡರ್, ಬೆಲ್ಲ, ಹಾರ್ಲಿಕ್ಸ್ … ಇನ್ನೇನೋ. ಪಕ್ಕದ ಮನೆಯ ಇಕ್ಕುನೊಂದಿಗೆ ಸೇರಿ ಬೀಡಿ ಎಳೆದದ್ದು, ಮೂಗಲ್ಲಿ ಹೊಗೆ ಬಿಡಲು ಹೋಗಿ ಕೆಮ್ಮು ಬಂದು ಅರ್ಧಕ್ಕೆ ಬಿಸಾಡಿದ್ದು, ರಾತ್ರಿ ಪೂರ ಹೊಟ್ಟೆಯಿಂದ ಹೊಗೆಯ ವಾಸನೆಗೆ ಕೆಮ್ಮಿ ಕೆಮ್ಮಿ ಸುಸ್ತಾದ್ದು. ಅದೆಲ್ಲ ಗೊತ್ತಾಗಿ ಅಲ್ಲಿಂದಲೇ ಗೊಳ್ಳೆಂದು ನಕ್ಕಿದ್ದೆ ನೀನು. ನನಗಿಲ್ಲಿ ಸಂಜೆ ತೋಟದ ಬದಿಯ ತೊರೆಯ ಸ್ನಾನದ ಮಜಾನೆ ಬೇರೆ ಇತ್ತು. ನಿನಗಲ್ಲಿ ಅಮ್ಮ ಹತ್ತು ಬಾರಿ ಕೂಗ್ಬೇಕು ನಿನ್ನ ಸ್ನಾನಕ್ಕೆ. ಅದರಲ್ಲೂ ಸೋಂಬೇರಿ ನೀನು!. pithooರಾತ್ರಿಯ ಅಜ್ಜಿ ಕತೆಯ ರಕ್ಕಸರು ನಿನಗೆ ಕೊಟ್ಟಷ್ಟೇ ಹೆದರಿಕೆ ನಂಗೂ ಕೊಟ್ಟಿತ್ತು. ಅದ ಕೇಳಿ ಬಚ್ಚಲು ಮನೆಗೆ ಹೋಗಲು ಭಯ ಅಲ್ವಾ … ?. ಬಾಲಮಂಗಳದ ಡಿಂಗ ಲಂಬೋದರ ನಿನಗೆಷ್ಟು ಇಷ್ಟವೋ ನಂಗೂ ಅಷ್ಟೇ ಇಷ್ಟ ಆಗಿದ್ರು. ನೀನಲ್ಲಿ ಮಾವಿನ ಮಿಡಿಯನ್ನು ಕದ್ದು ತಂದ ಉಪ್ಪಿನೊಂದಿಗೆ ತಿನ್ನುವಾಗ ಇಲ್ಲಿ ನನ್ನ ಬಾಯಲ್ಲಿ ನಿರೂರಿತ್ತು. ಅಪ್ಪನ ಸ್ಕೂಟರ್ ಮೇಲೆ ಕೂತ್ಕೊಂಡು ಅಂಬಾರಿ ಮೇಲೆ ಕೂತಂತೆ ಆದ್ಕೊತ್ತಿದ್ದೆ ನೀನು. ನಂಗೆ ಸಿರಾಜನ ಕೈಯಲ್ಲಿದ್ದ ಸೈಕಲ್ ನೋಡುವುದೇ ಕುಶಿ. ಶಾಲಾ ಟೂರ್-ಗೆ ನೀನು ನಿಮ್ಮ ಶಾಲೆಯ ಹೆಸರು ಹಾಕಿ ಪ್ರವಾಸಕ್ಕೆ ಶುಭವಾಗಲಿ ಅಂತ ಬರೆದು ಬಸ್ಸಿಂದಲೇ ಹಾರಿಸಿದ ಚೀಟಿ ನಮ್ಮೂರಿನ ರಸ್ತೆಯಲ್ಲಿ ಸಿಕ್ಕಿತ್ತು. ನಿನ್ನ ದುಂಡು ಅಕ್ಷರ ಎಷ್ಟು ಚೆಂದ ಗೊತ್ತಾ..?. ನೀನಲ್ಲಿ ನಿನ್ನಬ್ಬನ ಜೊತೆ ಸೇರಿ ಊಟ ಮಾಡುವಾಗ ನಾನು ಕೂಡಾ ಉಪ್ಪನೊಟ್ಟಿಗೇ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆ. ದೂರದರ್ಶನ ಬಂದ ಮೇಲಂತು ಶಕ್ತಿಮಾನ್ ನಮಗೆ ಹೀರೋ ಆಗಿದ್ದ. ದಿ ಗ್ರೇಟ್ ಡಾಕ್ಟರ್ ತಮ್ರಾಜ್ ಕಿಲ್ವಿಶ್ ಕರ್ಕಶವಾಗಿ “ಅಂಧೇರಾ ಖಾಯಂ ರಹೇ ..” ಅನ್ನುವಾಗ ನೀನಲ್ಲಿ ಕಂಪಿಸುತ್ತಿದ್ದೆ. ನಾನಿಲ್ಲಿ ಅದನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆ. ಆಮೇಲೆ ರಾತ್ರಿಯ ಚಿತ್ರಗೀತ್ ‘ಸುರಾಗ್’ ಇಬ್ರು ಬಿಡದೆ ನೋಡ್ತಿದ್ದೆವು. ಬದುಕು ಸಾಗುತ್ತಿತ್ತು. ನಮ್ಮೆಲ್ಲ ಮಗುತನವನ್ನು ಅಳಿಸಿ … ನಂತರ ಹೈಸ್ಕೂಲು, ಪಿಯೂಸಿ, ಡಿಗ್ರಿ…. ಇಲ್ಲೇಲ್ಲವೂ ನಮ್ಮಿಬ್ಬರ ಅಭಿರುಚಿಗಳು kabaddiಸಮಾನವಾಗಿತ್ತು. ದೂರದೂರವಿದ್ದರೂ ಯಾವುದೊ ಅಗೋಚರ ಶಕ್ತಿ ನಮ್ಮನ್ನು ಅವಿನಾಭಾವವಾಗಿ ಬೆಸೆದಿತ್ತು. ಬೆಳೆಯುತ್ತ ಬೆಳೆಯುತ್ತಾ ಇಂದಿನ ನಾವಾಗಿದ್ದೇವೆ. ಎರಡು ದೇಹ ಎರಡು ಹೃದಯ, ಅದರ ತುಡಿತ ಮಿಡಿತ ಒಂದೇ… ಒಂದೇ ಮನಸ್ಸು. ನಾನು ಏನಾಗಿತ್ತೋ ನೀನೂ ಅದೇ ಆಗಿದ್ದೆ. ಮೌನ ಕಣಿವೆಯಲ್ಲಷ್ಟೇ ನನ್ನ ಭಾವನೆಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಬೇರೆಲ್ಲೂ ಅದು ತೆರೆದುಕೊಳ್ಳುವುದಿಲ್ಲ. ನಿರ್ದಿಷ್ಟ ಗಡಿಯೊಳಗಷ್ಟೇ ಅದು ಚಲಾವಣೆಗೊಳ್ಳುತ್ತದೆ. ಬಹುಶಃ ಈ ತರದ್ದೊಂದು ಗಡಿಯಿಟ್ಟು ಕೊಂಡವರಿಗಷ್ಟೇ ಪರಸ್ಪರ ತುಡಿತ, ಆತಂಕ, ಅಭೀಪ್ಸೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರಬಹುದು. ಹಾಗಾಗಿಯೇ ಇವತ್ತಿನ ಈ ಕ್ಷಣದವರೆಗಿನ ನಮ್ಮ ಆತ್ಮೀಯತೆ ಈ ಮಟ್ಟಕ್ಕೆ ಬಂದು ನಿಂತದ್ದು.

ನೀನು ಅಂತರಾತ್ಮದಲ್ಲಿ ಸೃಜಿಸುವ ಜೀವಕಲೆ.. ನನ್ನ ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ ಉಸಿರಿಗೆ ಜೀವನ್ಮುಖೀ ಭಾವತುಂಬಿ ಎದೆಯ ಶೂನ್ಯ ಬಟ್ಟಲ ತುಂಬಿಕೊಡುವ ಆವರ್ತ ಮಳೆ. ಎದೆ ಬಯಲಲಿ ಹೂ ಬಿಡುವ ಮಧುರ ಭಾವಗಳ ಒರತೆಯ ಮೂಲ ಸೆಲೆ. ಇನ್ನು ಯಾವ ಪರದೆಯೂ ಪರಿಧಿಯೂ ಇಲ್ಲ(ಬೇಡ).. ಆತ್ಮ ಸಂಗಾತ ನೀನು… ಆತ್ಮದೊಳಗಿಂದ ಭರವಸೆಯ ಕಿಡಿಗೆ ನಿನ್ನದೇ ಹೆಸರಿದೆ, ಉಸಿರಿದೆ.. ಬಾ.. ನೀನೊಮ್ಮೆ ಸಾಗರವಾಗು… ನದಿಯಾಗಿ ಹರಿದು ನಿನ್ನಲ್ಲೇ ಲೀನವಾಗಬೇಕು.. ನನ್ನ ಅಸ್ತಿತ್ವವೇ ಇಲ್ಲದ ಹಾಗೆ… ಅದರಲ್ಲೇ ಹೆಚ್ಚು ಖುಷಿ ನನಗೆ.

~ಹುಸೇನಿ

Leave a comment

8 thoughts on “ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …

  1. ಬಾಲ್ಯದ ನೆನಪಿನ ಸಂಚಿ ತೆರೆದಷ್ಟೂ ಅಲ್ಲಾವುದ್ದೀನನ ಅದ್ಭುತ ದೀಪದ ಹಾಗೆ ಏನೆಲ್ಲಾ ಮೊಗೆದುಕೊಡುತ್ತದಲ್ಲಾ ! ಅದರಲ್ಲೂ ನಂಟಿನ ಗಂಟಿಕೆ ಕೈಯಿಕ್ಕಿದರೆ ಕೇಳುವಂತೆಯೇ ಇಲ್ಲ 🙂

    ಮುದ ಕೊಡುವ ಫ್ರೌಢ, ಆಪ್ಯಾಯಮಾನ ಬರಹ 😊

    Liked by 1 person

    1. ಹೌದು ನಾಗೇಶಣ್ಣ .. ಬಾಲ್ಯವೇ ಹಾಗೆ .. ಜಗತ್ತಿನ ಅತೀ ಮುಗ್ದತನ ನೀಡುವ ಆ ಮೋದವನ್ನು ಬಣ್ಣಿಸಲು ‘ನೆನಪಿನ ಸಂಚಿ’ ಸಾಕಾಗದೆ ಬರಬಹುದು… ಅಪರಿಮಿತ ಖುಷಿಯ ವಾಗ್ದಾನದೊಂದಿಗೆ ಬರುವ ಬಾಲ್ಯದ ಪ್ರತೀ ನಿಮಿಷವೂ , ಬದುಕಿನ ವೇಗದೊಂದಿಗೆ ತಾಳೆಯಾಗದೆ ಚಡಪಡಿಸುವ ಯವ್ವನದ ಜೀವ ಪ್ರೇರಕವಾಗಿ ನಿಲ್ಲುವ ಬಗೆಯ ಬಗ್ಗೆ ನಾನು ಹೇಳದೆಯೇ ನಿಮಗೆ ತಿಳಿದಿರಬಹುದು !, ನಾನು ಅಂಥಹ ಬಾಲ್ಯದ ವ್ಯಸನಿ 🙂

      ಧನ್ಯವಾದಗಳು ನಿಮ್ಮ ಮೆಚ್ಚು ನುಡಿಗಳಿಗೆ …

      Liked by 1 person

  2. ಚಿಣ್ಣರ ಚಾವಡಿಯ ಸವಿ ಸವಿ ನೆನಪು ಭದ್ರವಾಗಿ ಬಚ್ಚಿಟ್ಟುಕೊ ಪುಟ್ಟ, ಮುಸ್ಸಂಜೆಯ ಹೊತ್ತಲ್ಲಿ ಬೊಚ್ಚು ಬಾಯಿಗೊಂದಿಷ್ಟು ನಗು ನಗ್ಗುವ ಗುಳಿಗೆಗಳು ಅವು. ಜೋಪಾನ!

    Like

    1. ಚಿಣ್ಣರ ಚಾವಡಿಯ ಅಮೃತ ಘಳಿಗೆಯಲ್ಲೇ ಹೆಚ್ಚು ಬದುಕುವವನು ನಾನು! ಕಾಪಿಡುತ್ತೇನೆ. .. ಮುಸ್ಸಂಜೆಯ ಹೂಬಾಡುವ ಹೊತ್ತಲ್ಲಿ ಒಂದಿಷ್ಟು ನಗುವ ಕಡದಾಸೆಗೆಯಾದರೂ!

      Liked by 1 person

      1. ಸುಮ್ಮನೆ ಹೇಳಿದೆ. ಈ ಮುಸ್ಸಂಜೆ ಇನ್ನು ತುಂಬಾ ದೂರ ಇದೆ ನಿಮಗೆ. ಈಗಿರುವ ಗಳಿಗೆ ಅನುಭವಿಸಿ ಸಾಹಿತ್ಯ ಲೋಕದಲ್ಲಿ.

        Like

Leave a comment