ನ್ಯಾನೋ ಕಥೆಗಳು · ಪವಾಡ ಮತ್ತು ಇತರ ನ್ಯಾನೋ ಕತೆಗಳು

ಪವಾಡ ಮತ್ತು ಇತರ ನ್ಯಾನೋ ಕತೆಗಳು


ಶತ್ರು
ಒಂದು ಹಕ್ಕಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದನ್ನು ಕುಕ್ಕಲು ಶುರುವಿಟ್ಟಿತು. ತನ್ನ ಕೊಕ್ಕಿಗೆ ನೋವಾದರೂ ಅದು ಕುಕ್ಕುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಣ್ಣಗಾಗಿ ಅದು ದೂರ ಹಾರಿ ಹೋಯ್ತು. ಮರು ದಿನವೂ ಇದೇ ಪುನರಾವರ್ತನೆ ಆಯಿತು. ತಾನು ಕುಕ್ಕುವುದು ತನ್ನ ಪ್ರತಿಬಿಂಬವನ್ನು ಅಂತ ಅದಕ್ಕೆ ತಿಳಿಯಲಿಲ್ಲ. ಕೊನೆಗೆ ತನ್ನಲ್ಲಿದ್ದ ಎಲ್ಲ ಶಕ್ತಿಯನ್ನು ಉಪಯೋಗಿಸಿ ಕುಕ್ಕಿದಾಗ ಕನ್ನಡಿ ಒಡೆದು ಚೂರಿ ಚೂರಾಯಿತು.ಈಗ ಅದರ ಪ್ರತಿಬಿಂಬ ನಾಲ್ಕಾಯ್ತು…. ಐದಾಯ್ತು. ಅದು ತನ್ನ ಶತ್ರುಗಳ ಸಂಖ್ಯೆ ಹೆಚ್ಚಾದುದು ಕಂಡು ಹೆದರಿ ದೂರಕ್ಕೆ ಹಾರಿ ಹೋಯ್ತು..
ಮನಷ್ಯನಿಗೆ ಶತ್ರುಗಳು ಹೆಚ್ಚಾಗುವುದು ಹೀಗೆಯೇ .. ಕತೆ ಮುಗಿಸಿದ ಸಂತ ದೀರ್ಘ ನಿಟ್ಟಿಸಿರು ಬಿಡುತ್ತಾ ಅದರ ತಾತ್ಪರ್ಯವನ್ನು ತನ್ನ ಶಿಷ್ಯಂದಿರ ಮುಂದಿಟ್ಟ .

ಪವಾಡ
ತನ್ನ ಪವಾಡದಿಂದ ದೇಶ ವಿದೇಶಗಳಿಂದ ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿಯ ಆಸ್ಥಾನವದು. ಭಕ್ತರು ಒಬ್ಬೊಬ್ಬರಾಗಿ ತಮ್ಮ ಕಷ್ಟಗಳನ್ನು ಸ್ವಾಮೀಜಿ ಬಳಿ ನಿವೇದಿಸುತ್ತಿದ್ದರು. ಸ್ವಾಮೀಜಿ ತನ್ನ ಪವಾಡದಿಂದ ಗಾಳಿಯಿಂದ ಭಸ್ಮವನ್ನು ಸೃಷ್ಟಿಸಿ ಹಸನ್ಮುಖರಾಗಿ ಅವರಿಗೆ ಹಂಚುತ್ತಿದ್ದನು. ಭಕ್ತ ಸಮೂಹ ಅದನ್ನು ಅಷ್ಟೇ ಆದರದಿಂದ ಪಡೆದು ಧನ್ಯತೆಯ ಭಾವದಿಂದ ಹಿಂತಿರುಗುತ್ತಿದ್ದರು.
ಬರಗಾಲದಿಂದ ಕಂಗಾಲಾಗಿದ್ದ ರೈತನೊಬ್ಬ ಸ್ವಾಮೀಜಿ ಬಳಿ ಬಂದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡನು.. ಸ್ವಾಮೀಜಿ ಎಂದಿನಂತೆ ಗಾಳಿಯಿಂದ ಭಸ್ಮವನ್ನು ತೆಗೆದು ಕೊಟ್ಟಾಗ ಅದನ್ನು ತಿರಸ್ಕರಿಸುತ್ತಾ ‘ ಬರದಿಂದ ಕಂಗಾಲಾದ ನನಗೆ ಬೇಕಾದುದು ಭಸ್ಮವಲ್ಲ, ಒಂದಿಷ್ಟು ಅಕ್ಕಿ ಮತ್ತು ಒಂದಿಷ್ಟು ಕಾಳುಗಳನ್ನು ತಾವು ಗಾಳಿಯಿಂದ ಸೃಷ್ಟಿಸಿ ಕೊಡಿ ..’ ನಯವಾಗಿ ರೈತನು ಬೇಡಿಕೆಯಿಟ್ಟನು.. ಸ್ವಾಮೀಜಿಯ ಮುಖದಲ್ಲಿದ್ದ ‘ಪ್ರಸನ್ನತೆ’ ಒಮ್ಮೆಲೇ ಮಾಯವಾಯ್ತು…

ನಾನು – ನೀನು
“ಪ್ರೀತಿ ಅಂದರೆ ಏನು ?” ಹಾಲು ಚೆಲ್ಲಿದ ಬೆಳದಿಂಗಳ ಬೆಳಕಿನಲ್ಲಿ ಆತನೊಂದಿಗಿದ್ದ ಅವಳು ಒಮ್ಮೆಲೇ ಪ್ರಶ್ನೆಯ ಬಾಣವನ್ನು ಛೂ ಬಿಟ್ಟಳು. ಪ್ರೀತಿಯೆಂದರೆ ಒಲವು , ವಿಶ್ವಾಸ, ಕಾಳಜಿ , ನವಿರು ಸ್ಪರ್ಶ , ಭಾವನೆಗಳು , ಕಾಮನೆಗಳ ಮಧುರ ಮಿಲನ ಆತ ಯೋಚಿಸುತ್ತ ಹೋದ, ಹೇಳಿದರೂ ಹೇಳಲಾಗದ ವಿವರಿಸಿದರೂ ವಿವರಿಸಲಾಗದ ವಿಚಿತ್ರ ವಿಕ್ಷಿಪ್ತ ವಿಸ್ಮಯವಾದ ಪ್ರೀತಿಯನ್ನು ಆತ ಪದಗಳಲ್ಲಿ ಕಟ್ಟಿ ಹಾಕಲು ಹೋಗಿ ಕೊನೆಗೆ ಸೋಲೊಪ್ಪಿ ಮೆಲ್ಲನೆ ಉಸಿರಿದ ” ಏನಿಲ್ಲ ಹುಡುಗಿ , ಪ್ರೀತಿಯೆಂದರೆ ಬರಿ ನಾನು ನೀನು…!”

ಕಾಗೆಗಳು
ನಡೆದು ಸುಸ್ತಾದ ಅವನು ಒಂದು ಕಲ್ಲಿನ ಮೇಲೆ ಕೂತ. ದೂರದಲ್ಲಿ ಕಾಗೆಗಳು ಏನನ್ನೋ ಕುಕ್ಕಿ ಎಳೆಯುತ್ತಿದೆ. ಜೊತೆ ಜೊತೆಗೆ ಆ ಕಾಗೆಗಳು ಇನ್ನಿತರ ಕಾಗೆಗಳನ್ನು ಕೂಗಿ ಕರೆಯುತ್ತಿವೆ. ಅವನು ಅಲ್ಲಿಂದ ಎದ್ದು ನಡೆದ. ಅವನ ಗೆಳೆಯನೊಬ್ಬ ಆವರೆಗೂ ಅವನ ಜೊತೆಗೆ ಇದ್ದ. ಅಲ್ಲಿಂದ ಮತ್ತೆ ಅವರು ಎರಡು ದಾರಿಯಲ್ಲಿ ಹೊರಟರು. ನಡೆದು ಕ್ಷೀಣಿಸಿದ ಅವನು ಹೋಟೆಲನ್ನು ಕಂಡದ್ದೇ ಅದರೊಳಗೆ ಹೊಕ್ಕ . ಹೊಟ್ಟೆ ತುಂಬಾ ತಿಂದು ತೇಗು ಬಿಡುತ್ತ ಹೊರಬರುತ್ತಿದ್ದಂತೆ ಅವನಿಗೆ ತನ್ನ ಗೆಳೆಯನ ನೆನಪಾಯ್ತು… “ಅವನೀಗ ಹಸಿದು ಕಂಗಾಲಾಗಿ ನಡೆಯುತ್ತಿರಬಹುದೇನೋ…?!”

ಕಾಡು
ತಾನು ಕಾಡೊಳಗೆ ಸಿಕ್ಕಿ ಹಾಕಿಕೊಂಡಿದ್ದೇನೆ ಅಂತ ಸಿಂಹಕ್ಕೆ ತಟ್ಟನೆ ಗೊತ್ತಾಯ್ತು, ಸುತ್ತಲು ದಟ್ಟವಾದ ಕಾಡು. ಅಲ್ಲಿ ಓಡುತ್ತಿರುವ ಯಾವುದೋ ವಿಚಿತ್ರ ಜೀವಿಗಳು (ಮನುಷ್ಯರು ಮತ್ತು ವಾಹನಗಳು) . ತಾನು ಸೂಕ್ಹ್ಮವಾಗಿ ಗಮನಿಸಿ ನಡೆಯದಿದ್ದರೆ ತನ್ನ ಜೀವಕ್ಕೆ ಆಪತ್ತು ಎಂದು ಅವನಿಗೆ ತಿಳಿಯಿತು. ಅವನು ಅವರ ಕಣ್ಣಿಗೆ ಬೀಳದಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟ. ಆದರೂ ಅದ್ಯಾವುದೋ ಕ್ಷಣದಲ್ಲಿ ಅವರ ಕಣ್ಣಿಗೆ ಬಿದ್ದ. ತೂರಿ ಬಂದ ಅವರ ಆಯುಧ (ಗುಂಡು) ಅವನನ್ನು ನೆಲಕ್ಕೆ ಅಪ್ಪಳಿಸಿತು. ಅವನ ಕೊನೆಯ ಘರ್ಜನೆಯಲ್ಲಿ ರಾಜ ಗಾಂಭೀರ್ಯವಿತ್ತು. ಆದರೆ ಆ “ಕಾಂಕ್ರೀಟ್ ಕಾಡಿನಲ್ಲಿ” ಅದನ್ನು ಯಾರು ತಾನೆ ಕೇಳಿಯಾರು….?

ಚಿತ್ರಕೃಪೆ : ಅಂತರ್ಜಾಲ


Leave comments

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

8 thoughts on “ಪವಾಡ ಮತ್ತು ಇತರ ನ್ಯಾನೋ ಕತೆಗಳು

Leave a comment